ಅಮರಗಿರಿ ಮಾಲೆಕಲ್ ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ

 
ಹಾಸನ ಜಿಲ್ಲೆಯ  ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೆಕಲ್ ತಿರುಪತಿ ಮಹಾರಥೋತ್ಸವ
ಮೂಲ ತಿರುಪತಿಯಂತೆಯೇ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿಯೂ ತಿರುಪತಿಗಳಿವೆ. ಅವುಗಳಲ್ಲಿ ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೆಕಲ್ ತಿರುಪತಿಯೂ ಒಂದು. ಪ್ರತಿ ವರ್ಷ ಆಷಾಢಮಾಸದಲ್ಲಿ ಇಲ್ಲಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ರಥೋತ್ಸವ ಜರುಗುತ್ತದೆ. ಈ ರಥೋತ್ಸವವು ಇಂದು ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. 
 
ಶ್ರೀಮದ್ ವೆಂಕಟರಮಣ ಗೋವಿಂದಾ....ಗೋವಿಂದಾ....ಗೋವಿಂದ, ಗೋವಿಂದಾ ಎಂಬ ಭಕ್ತರ ಹರ್ಷೋದ್ಘಾರದ ನಡುವೆ ರಾಜ್ಯದ ತಿರುಪತಿಯೆಂದೇ ಪ್ರಸಿದ್ಧಿ ಪಡೆದಿರುವ ಮಾಲೇಕಲ್‌ ಅಮರಗಿರಿ ತಿರುಪತಿಯ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಇಂದು ಸಡಗರದಿಂದ ನಡೆಯಿತು. ಮಹಾರಥೋತ್ಸವದ ಅಂಗವಾಗಿ  ಶ್ರೀನಿವಾಸ ಕಲ್ಯಾಣ ಮತ್ತು ಗಜಾರೋಹಣದ ಉತ್ಸವಗಳು ಜರುಗಿದವು. ಶ್ರೀಯವರಿಗೆ, ಅಮ್ಮನವರಿಗೆ, ಉತ್ಸವಮೂರ್ತಿಗೆ, ದೇವಾಲಯಕ್ಕೆ, ಹೂವಿನಿಂದ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಇಲ್ಲಿನ ಮತ್ತೊಂದು ವಿಶೇಷವೆಂದ್ರೆ ದೇವಾಂಗ, ಬ್ರಾಹ್ಮಣ ಹಾಗೂ ಆರ್ಯವೈಶ್ಯ ಸಮಾಜದಿಂದ ಭಕ್ತರಿಗೆ ಅನ್ನ ಸಂತರ್ಪಣೆ  ಮಾಡಲಾಗುತ್ತದೆ. ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗ ದಳದ ಕಾರ‍್ಯಕರ್ತರು ಬೆಟ್ಟದ ತಪ್ಪಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ರು. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.ದೂರದಿಂದ ಆಗಮಿಸುವ ಭಕ್ತರನ್ನೊಳಗೊಂಡಂತೆ ಹಾಗೂ ಬೆಟ್ಟ ಹತ್ತುವ ಎಲ್ಲರನ್ನೂ ಲೋಹ ಶೋಧಕ ಯಂತ್ರದಿಂದ ತಪಾಸಣೆ ಮಾಡಲಾಗಿತ್ತು. ಭದ್ರತೆಯ ದೃಷ್ಠಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ CCTV ಕ್ಯಾಮರಾ ಅಳವಡಿಸಲಾಗಿತ್ತು.
 
 ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀದೇವಿ ಭೂದೇವಿ ಸಮೇತ ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಯನ್ನು ನಾನಾ ಪುಷ್ಪಗಳಿಂದ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಮಹಾ ಮಂಗಳಾರತಿ ಬಳಿಕ ಭಕ್ತರು ಗೋವಿಂದ ಎನ್ನುತ್ತಾ ರಥ ಎಳೆದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀ ಹಾಗೂ ಶಯನಾ ವ್ಯಸ್ಥೆಯಲ್ಲಿರುವ ಗೋವಿಂದರಾಜಸ್ವಾಮಿಗೆ ಪೂಜೆ ಸಲ್ಲಿಸಿದರು. ಕೆಲವರು ಬೆಟ್ಟವನ್ನೇರಿ ಪದ್ಮಾವತಿ ಸಮೇತನಾದ ವೆಂಕಟರಮಣಸ್ವಾಮಿಯ ದರ್ಶನ ಪಡೆದರು. ಪ್ರತಿ ವರ್ಷ ಆಷಾಢ ಮಾಸದ ಶುದ್ಧ ದ್ವಾದಶಿಯಂದು ವೈಕನಾಸ ಸಂಪ್ರದಾಯದಂತೆ ರಥೋತ್ಸವ ನಡೆಯಲಿದೆ. ರಥೋತ್ಸವದ ಅಂಗವಾಗಿ ಸೂರ್ಯ ಮಂಡಲೋತ್ಸವ, ರಥ ಮಂಟಪ ಸೇವೆ, ವಸಂತ ಸೇವೆ, ಪೊಂಗಲ್‌ ಸೇವೆ, ಮೂಲ ಗುಡಿಯಲ್ಲಿ ವಸಂತ ಸೇವೆ, ರಾತ್ರಿ ಪುಷ್ಪಗಂಧೋತ್ಸವ, ಉಯ್ಯಾಲೋತ್ಸವ ಸಂಪ್ರದಾಯದಂತೆ ನಡೆದವು.ನವ ವಿವಾಹಿತರು ಪಾಲ್ಗೊಂಡು ಪದ್ಮಾವತಿ ಹಾಗೂ ಶ್ರೀನಿವಾಸನ ದರ್ಶನ ಪಡಿತಾರೆ. ರಥಕ್ಕೆ ಹಣ್ಣು ಜವನ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಾರೆ. ರಥೋತ್ಸವದ ಅಂಗವಾಗಿ ನಗರದಿಂದ ಬೆಟ್ಟದ ಸಮೀಪಕ್ಕೆ ಹೆಚ್ಚು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಹರಕೆ ಹೊತ್ತವರು ಕಾಲ್ನಡಿಗೆಯಲ್ಲೇ ತೆರಳಿ ದೇವರ ದರ್ಶನ ಪಡೆದರು.
 
ಕ್ಷೇತ್ರದ ಹಿನ್ನಲೆಯನ್ನ ನೋಡುವುದಾದ್ರೆ
 
ವಸಿಷ್ಠ ಮಹರ್ಷಿಗಳು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸು ಮಾಡಿ ಆಷಾಢ ದ್ವಾದಶಿಯಂದು ದರ್ಶನ ಪಡೆದರೆಂದು ಹೇಳಲಾಗುತ್ತದೆ. ಅದೇ ರೀತಿ ಅಶ್ವತ್ಥಾಮ ಕೂಡ ಬ್ರಹ್ಮಹತ್ಯಾದೋಷ ನಿವಾರಣೆಗಾಗಿ ವಸಿಷ್ಠತೀರ್ಥದಲ್ಲಿ ಮಿಂದು ತಪಸ್ಸು ಮಾಡಿ ಆಷಾಢದಲ್ಲಿಯೇ ಶ್ರೀ ವೆಂಕಟರಮಣನ ದರ್ಶನ ಪಡೆದನೆನ್ನುತ್ತಾರೆ. ಹೀಗಾಗಿ ಇಲ್ಲಿ ಪ್ರತಿವರ್ಷ ಆಷಾಢಮಾಸದ ದ್ವಾದಶಿಯಂದು ರಥೋತ್ಸವದ ಸಂಪ್ರದಾಯ ಬೆಳೆದು ಬಂದಿದೆ. ಏಳೆಂಟು ಶತಮಾನಗಳ ಹಿಂದೆ ಚಿತ್ರದುರ್ಗವನ್ನಾಳುತ್ತಿದ್ದ ತಿಮ್ಮಪ್ಪ ನಾಯಕನೆಂಬ ಪಾಳೇಗಾರ ತನ್ನ ಮನೆದೇವರಾದ ದೊಡ್ಡ ತಿರುಪತಿ ವೆಂಕಟರಮಣನ ದರ್ಶನಕ್ಕೆ ಇದೇ ಮಾರ್ಗವಾಗಿ ಯಾತ್ರೆ ಕೈಗೊಂಡಿದ್ದನಂತೆ. ಒಮ್ಮೆ ಕಾರಣಾಂತರದಿಂದ ಅಡಚಣೆಯುಂಟಾಗಿ ದರ್ಶನವಾಗಿರಲಿಲ್ಲವಂತೆ. ಇದೇ ಚಿಂತೆಯಲ್ಲಿ ಬೆಟ್ಟದ ಹಿಂಭಾಗದಲ್ಲಿರುವ ನಾಗಪುರಿ ಅರಣ್ಯದಲ್ಲಿ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದ ವೇಳೆ ಶ್ರೀ ಲಕ್ಷ್ಮೀವೆಂಕಟೇಶ್ವರನು ಕನಸಿನಲ್ಲಿ ಬಂದು, ನೀನು ಚಿಂತಾಕ್ರಾಂತನಾಗಬೇಡ ನಿನಗೆ ಇಲ್ಲಿಯೇ ದರ್ಶನ ಕೊಡುತ್ತೇನೆ. ಅದಕ್ಕಾಗಿ ನೀನು ಬೆಟ್ಟದ ಮೇಲೆ ತುಳಸಿ ಬಿದ್ದಿರುವಂತೆಯೇ ದಾರಿ ಮಾಡಿಸು ಎಂದನಂತೆ.
 
 ಅದರಂತೆಯೇ ಬೆಳಗ್ಗೆ ಬೆಟ್ಟದ ತಪ್ಪಲಿನಲ್ಲಿ ಹುಡುಕಿದಾಗ ತುಳಸಿಮಾಲೆ ಬಿದ್ದಿರುವುದನ್ನು ಕಂಡು ಬೆಟ್ಟಕ್ಕೆ 1200ಕ್ಕೂ ಹೆಚ್ಚಿನ ಮೆಟ್ಟಿಲುಗಳ ದಾರಿ ನಿರ್ಮಾಣ ಮಾಡಿಸಿ ನಾರಾಯಣನ ದರ್ಶನ ಪಡೆದನೆಂಬ ಐತಿಹ್ಯವಿದೆ. ಆದ್ದರಿಂದಲೇ ಈ ಸ್ಥಳಕ್ಕೆ ಮಾಲೇಕಲ್ ತಿರುಪತಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಪ್ರಜೆಗಳ ಅನುಕೂಲಕ್ಕಾಗಿ ಬೆಟ್ಟದ ಬಲಭಾಗದಲ್ಲಿ ಕೆರೆ ಕಟ್ಟಿಸಲು ಭೂಮಿ ಅಗೆಯುತ್ತಿದ್ದಾಗ ಗೋವಿಂದರಾಜಸ್ವಾಮಿಯ ವಿಗ್ರಹ ದೊರೆತಿದ್ದು ಅದನ್ನು ಬೆಟ್ಟದ ತಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇಗುಲದ ಬಲಭಾಗದಲ್ಲಿ ಪದ್ಮಾವತಿ ಅಮ್ಮನವರ ದೇವಾಲಯವಿದ್ದು, ಈ ವಿಗ್ರಹವನ್ನು ವಿದ್ಯಾರಣ್ಯರು ಪ್ರತಿಷ್ಠಾಪಿಸಿದರು ಎನ್ನಲಾಗುತ್ತಿದೆ. 17ರಂದು ಪಂಚಾಮೃತ ಅಭಿಷೇಕದೊಂದಿಗೆ ರಥೋತ್ಸವ ಪೂಜಾವಿಧಾನಗಳು ವಿಧ್ಯುಕ್ತವಾಗಿ ಆರಂಭಗೊಂಡಿದ್ದು, ಇಂದು ರಂದು ರಥೋತ್ಸವ ವೆಂಕಟೇಶ್ವರನ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
 
 ಒಟ್ಟಾರೆ ಕಳೆದ 8 ದಿನಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿದ್ದು, ಇಂದು ನಡೆದ ಬ್ರಹ್ಮ ರಥೋತ್ಸವಕ್ಕೆ ಲಕ್ಷ್ಮಾಂತರ ಭಕ್ತರು ಸಾಕ್ಷಿಯಾಗಿದ್ರು. ಜೊತೆಗೆ ಆ.2ರಂದು ಗರುಡೋತ್ಸವದೊಂದಿಗೆ ಈ ಕಾರ್ಯಕ್ರಮಗಳಿಗೆ ತೆರೆ ಬೀಳಲಿದ್ದು, ಇಂದು ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಹಲವು ಪ್ರಮುಖರು ಭಾಗಿಯಾಗಿದ್ರು.
 
 
Last modified on 25/07/2018

Share this article

About Author

Madhu
Leave a comment

Write your comments

Visitors Counter

224348
Today
Yesterday
This Week
This Month
Last Month
All days
367
382
1693
749
6704
224348

Your IP: 3.140.186.201
2024-05-02 22:42

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles