ತಾಲೂಕಿನ ಅಘಲಯ ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರದ ಕಾರಣ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ರದ್ದು ಪಡಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನಲೆ ಸಭೆಯಲ್ಲಿದ್ದ ಗ್ರಾಮಸ್ಥರು ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದರು.ಅಲ್ಲದೆ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಭಾರತಿಶ್ರೀಧರ್ ಕೂಡ ಬರದಿರುವುದು ಗ್ರಾಮಸ್ಥರು ಇನ್ನಷ್ಟು ಕೋಪಗೊಳ್ಳಲು ಕಾರಣವಾಯಿತು. ಬಳಿಕ ಮಾತನಾಡಿದ ಗ್ರಾಮದ ಯುವಮುಖಂಡ ಲಕ್ಷ್ಮೀಶ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚರಂಡಿ ವ್ಯವಸ್ಥೆ ಸರಿಯಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಕಳೆದ ಮೂರು ವರ್ಷದಿಂದ ಗ್ರಾಮದೊಳಗೆ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಸರ್ಕಾರದಿಂದ ಬಂದಿರುವ ಹಣ ಮಾತ್ರ ಖರ್ಚುಗಿದೆ. ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಬೀದಿ ದೀಪಗಳು ಸುಟ್ಟು ಹೋದರೆ ಬದಲಾವಣೆ ಮಾಡಲ್ಲ. ಲಕ್ಷಾಂತರ ರೂ ಖರ್ಚು ಮಾಡಿ ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ. ದೀಪ ಬದಲಾವಣೆ ಆದ ಮೂರ್ನಾಲ್ಕು ದಿನದಲ್ಲಿ ದೀಪಗಳು ಮತ್ತೇ ಸುಟ್ಟು ಹೋಗುತ್ತವೆ. ಸರಿಯಾಗಿ ದೀಪಗಳ ಬದಲಾವಣೆ ಮಾಡದೆ. ರಾತ್ರಿ ಸಮಯ ಜನರು ಹೊರ ಬರಲು ಹೆದರುತ್ತಿದ್ದಾರೆ ಎಂದು ದೂರಿದರು.
ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್ ಸಭೆಗೆ ನೋಡಲ್ ಅಧಿಕಾರಿಯಾಗಿ ಬಂದಿದ್ದರು. ಸಭೆ ರದ್ದಾದರಿಂದ ಅವರು ಕೂಡ ನಿರ್ಗಮಿಸಿದರು. ಪಂಚಾಯಿತಿ ಸದಸ್ಯರು ಕೂಡ ಸಭೆಯಲ್ಲಾದ ಗದ್ದಲಗಳಿಂದ ನಿರ್ಗಮಿಸಿದರು. ಸಭೆಯಲ್ಲಿ ಕಾಲಭೈರವೇಶ್ವರ ಯುವಕರ ಸಂಘದ ಸದಸ್ಯರು, ಶಿವಲಿಂಗೇಗೌಡ, ವಿಜಯ್, ಗಣೇಶ್, ವಿಶ್ವನಾಥ್, ಸೇರಿದಂತೆ ಹಲವರಿದ್ದರು.