ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ರೈತ ಹಸಿವಿನಿಂದ ನೀರಿನ ಇಕ್ಕಲಿಗೆ ಬಿದ್ದು ಮೃತಪಟ್ಟಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ತಿಮ್ಮರಾಯಗೌಡರ ಮಗ ಜವರೇಗೌಡರು( 59) ಎಂಬುವರು ತಮ್ಮ ಕಬ್ಬಿಗೆ ನೀರು ಹಾಯಿಸುವ ಸಂದರ್ಭದಲ್ಲಿ ಸುಸ್ತಾಗಿ (ಇಕ್ಕಲಿಗೆ) ಬಿದ್ದು ದಾರುಣ ಸಾವನ್ನಪ್ಪಿದ್ದಾರೆ.ಬಿ ಬಿ ಕಾವಲ್ ಎಲ್ಲೆಯಲ್ಲಿ ಒಂದು ಎಕರೆ ಕಬ್ಬು ಬೆಳೆದಿದ್ದಾರೆ. ಕಬ್ಬಿಗೆ ನೀರು ಹಾಯಿಸಲು ಜಮೀನಿಗೆ ಬೆಳಿಗ್ಗೆಯೇ ತೆರಳಿದ್ದರು. ವಿದ್ಯುತ್ ಬರದ ಕಾರಣ ಮಧ್ಯಾಹ್ನ ವಿದ್ಯುತ್ ಬರುತ್ತೆಂದು ಅಲ್ಲಿಯೇ ಕಾಯ್ದಿದ್ದಾರೆ. ಮಧ್ಯಾಹ್ನ ವಿದ್ಯುತ್ ಬಂದ ನಂತರ ಅಲ್ಲಿಯೇ ನೀರು ಹಾಯಿಸುಲು ಮುಂದಾಗಿದ್ದಾರೆ.ಮಧ್ಯಾಹ್ನವಾದರೂ ಊಟಕ್ಕೆ ಬರಲಿಲ್ಲವಲ್ಲ ಎಂದು ಊಟ ತೆಗೆದುಕೊಂಡು ಅವರ ಹೆಂಡತಿ ಜಯಂತಮ್ಮ ಗದ್ದೆಗೆ ಬಂದು ನೋಡಿದಾಗ ಇಕ್ಕಲಿನಲ್ಲಿ ಮಕಾಡೆ ಬಿದ್ದಿದ್ದಾರೆ. ಇದನ್ನು ನೋಡಿ ಗಾಬರಿಯಿಂದ ಕೂಗಾಡಿದಾಗ ಸುತ್ತಮುತ್ತಲಿನ ಜನರು ಆಂಬುಲೆನ್ಸ್ ಮೂಲಕ ಮೃತರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.