ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಇಳೆಗೆ ಸಂಜೆ 5 ಗಂಟೆ ವೇಳೆಗೆ ತಂಪೆರೆದ ಮಳೆರಾಯ.ನಗರದ ಹಲವೆಡೆ ಧರೆಗುರುಳಿದ ಮರಗಳು.
ಬೆಂಗಳೂರು: ನಗರದ ಮೂಡಲಪಾಳ್ಯ, ನಾಗರಬಾವಿ, ಬನಶಂಕರಿ, ರಾಜಾಜಿನಗರ, ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಕಂಠೀರವ ಸ್ಟುಡಿಯೋ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಂಜೆಯಿಂದ ಸಣ್ಣಗೆ ಮಳೆಯಾಗಿದ್ದು, ಕೆಲ ಭಾಗದಲ್ಲಿ ಭಾರೀ ಮಳೆ ಕೂಡ ಸುರಿದಿದೆ. ಈ ಮೂಲಕ ವರ್ಷದ ಮೊದಲ ವರ್ಷಧಾರೆಗೆ ಜನ ಹರ್ಷಿತರಾಗಿದ್ದಾರೆ.ನಗರದ ಹಲವೆಡೆ ವರುಣನ ಆರ್ಭಟಕ್ಕೆ ಮರಗಳು ಧರೆಗುರುಳಿವೆ. ಹೊಸೂರು ರಸ್ತೆಯ ನಿಮಾನ್ಸ್ ಆಸ್ಪತ್ರೆ, ಬಸವನಗುಡಿಯ ಬಲ್ ಟೆಂಪಲ್, ರಾಜಾಜಿನಗರದ ಎಂ.ಇ ಪಾಲಿಟೆಕ್ನಿಕ್ ಕಾಲೇಜು ಬಳಿ ಮರಗಳು ಧರೆಗುರುಳಿವೆ. ಇನ್ನು ಫ್ರೀಡಂ ಪಾರ್ಕ್, ಗಾಂಧಿನಗರದಲ್ಲಿ ಮರ ಬಿದ್ದು ಒಂದು ಕಾರ್ 4 ಬೈಕ್ ಜಖಂ ಆಗಿವೆ.ಕಳೆದೆರಡು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆ ವೇಳೆಗೆ ಮಳೆಹನಿಗಳು ಧರೆಗಿಳಿದು ಇಳೆಯನ್ನು ತಂಪಾಗಿಸಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು ಮಳೆಯ ಪ್ರಮಾಣ ಹೆಚ್ಚಿದರೆ ಸಂಚಾರ ದಟ್ಟಣೆ ನಿರ್ಮಾಣವಾಗುವ ಸಾಧ್ಯತೆ ಇದೆ.ವಾತಾವರಣದಲ್ಲಿ ಗಾಳಿಯ ಒತ್ತಡ (ಟ್ರಫ್) ಕಡಿಮೆಯಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ನಿಂದ ಅರಬ್ಬೀ ಸಮುದ್ರದವರಗೆ ಗಾಳಿಯ ಒತ್ತಡ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಫೆ.11ರವರೆಗೆ ರಾಜ್ಯದ ಹಲವೆಡೆ ಹಗುರ ಹಾಗೂ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.