Print this page

ರುಚಿ ರುಚಿಯಾದ ಹೆಸರುಕಾಳು ಪಲ್ಯ ಮತ್ತು ಹೋಳುಗಾಯಿ ಮಾಡುವ ವಿಧಾನ

ಬದನೆಕಾಯಿ ಹೋಳುಗಾಯಿಗೆ ಬೇಕಾಗುವ ಸಾಮಗ್ರಿ

ಮೀಡಿಯಂ ಸೈಜ್ ಬದನೆಕಾಯಿ  8 
ಹುರುಗಡಲೆ ಎರಡು ಹಿಡಿ 
ಒಂದು ಕೊಬರಿ ಹೋಳಿನ ತುರಿ 
ಒಂದು ಹೆಚ್ಚಿದ ಹಸಿ ಈರುಳ್ಳಿ
ಹುರಿದ ಒಣಮೆಣಸಿನಕಾಯಿ 8 
ಅರ್ಧ ಹಿಡಿ ಹುರಿದ ಕಡಲೆಬೀಜ 
ಒಂದು ಚಮಚ ಸಂಬಾರದ ಪುಡಿ 
ಉಪ್ಪು 
ಹುಣಸೆಹಣ್ಣು 
ಬೆಲ್ಲ 
ಬೆಳ್ಳುಳ್ಳಿ ಇವು ಅದಕ್ಕೆ ತಕ್ಕಷ್ಟು.
ಸ್ವಲ್ಪ ಎಣ್ಣೆ

ಮಾಡುವ ವಿಧಾನ

ಮೇಲಿನ ಎಲ್ಲಾ ಪದಾರ್ಥಗಳನ್ನು ನುಣ್ಣಗೆ ರುಬ್ಬಿಕೊಳ್ಳಬೇಕು .ಬದನೆಕಾಯಿಗಳನ್ನು ಹೋಳುಗಳಾಗಿ ಹಚ್ಚಿ ನೀರಿನಲ್ಲಿ ತೊಳೆದುಕೊಳ್ಳಬೇಕು.ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿದ ಬದನೆಕಾಯಿ ಹೋಳುಗಳನ್ನು ಹಾಕಿ ಸುಮಾರು ಹೊತ್ತು ಹುರಿದು ಆಮೇಲೆ ರುಬ್ಬಿದ ಮಸಾಲೆ ಹಾಕಿ ( ಮಸಾಲೆ ಸ್ವಲ್ಪ ನೀರಾಗಿರಲಿ ) ಸಣ್ಣ ಉರಿಯಲ್ಲಿಡಿ ,ಜಾಸ್ತಿ ಉರಿಯಿದ್ದರೆ ತಳ ಹತ್ತಬಹುದು .ಕುಕ್ಕರ್ ಎರಡು ಸಾರಿ ಕೂಗಿದ ಮೇಲೆ ಒಲೆಯಿಂದ ಕೆಳಗಿಳಿಸಿ .ಇದು ಚಪಾತಿ ,ದೋಸೆ ಮತ್ತು ಎಲ್ಲಾ ತರಹದ ರೊಟ್ಟಿಗಳಿಗೂ ತಿನ್ನಲು ಚೆನ್ನಾಗಿರುತ್ತದೆ .

ಹೆಸರುಕಾಳು ಪಲ್ಯ ಮಾಡಲು ಬೇಕಾಗುವ ಸಾಮಾನು

ಹೆಸರುಕಾಳು ಅರ್ಧ ಪಾವು 
ಈರುಳ್ಳಿ ಎರಡು 
ಹಸಿಮೆಣಸಿನಕಾಯಿ 4 
ಕರಿಬೇವು 
ಕೊತ್ತಂಬರಿ ಸೊಪ್ಪು 
ಉಪ್ಪು 
ನಿಂಬೆಹಣ್ಣು
ಸಂಬಾರ ಅರ್ಧ ಚಮಚ 
ಅರ್ಧ ಹೋಳಿನ ತೆಂಗಿನತುರಿ 
ಸಕ್ಕರ ಖಾಲು ಚಮಚ
ಎಣ್ಣೆ  4 ಚಮಚ 
ಸಾಸಿವೆ ಸ್ವಲ್ಪ 
ಚಿಟಕಿ ಅರಿಶಿನ

ಮಾಡುವ ವಿಧಾನ 
ಹೆಸರು ಕಾಳನ್ನು ಸ್ವಲ್ಪ  ಉಪ್ಪು ಹಾಕಿ ಸ್ವಲ್ಪ ಗಟ್ಟಿಯಿರುವಂತೆ ಬೇಯಿಸಿಕೊಳ್ಳಬೇಕು . ಈರುಳ್ಳಿ ಹಸಿಮೆಣಸಿನಕಾಯಿ ಹಚ್ಚಿಕೊಂಡು ಅದಕ್ಕೆ ಕರಿಬೇವು ಹಾಕಿಕೊಳ್ಳಬೇಕು .ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಹಚ್ಚಿಕೊಂಡ ಸಾಮಗ್ರಿಗಳನ್ನು ಬಾಣಲೆಗೆ ಹಾಕಿ  ಕೈ ಆಡಿಸಿ ಅರಿಶಿನದ ಪುಡಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಅದಕ್ಕೆ ಬೆಂದ ಹೆಸರುಕಾಳನ್ನು ಹಾಕಿ ಇನ್ನೊಂದು ಸ್ವಲ್ಪ ಉಪ್ಪು ಸಂಬಾರ ತೆಂಗಿನತುರಿ ಸಕ್ಕರೆ ನಿಂಬೆಹುಳಿ ಎಲ್ಲಾ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕೈಯಾಡಿಸಿ ಕೆಳಗಿಳಿಸಬೇಕು .

ಕ್ಯಾಪ್ಸಿಕಂ ಪಲ್ಯ

ಇದು  ಕೂಡ ಹೆಸರುಕಾಳಿನ ಪಲ್ಯದ ಹಾಗೆಯೇ. ಒಗ್ಗರಣೆ ಜೊತೆ ಹಚ್ಚಿಕೊಂಡ ಕ್ಯಾಪ್ಸಿಕಂ  ಪೀಸುಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿದು  ತೆಂಗಿನತುರಿ ಬಿಟ್ಟು ಅದಕ್ಕೆ ಹೇಳಿರುವ  ಅದೇ  ಎಲ್ಲಾ ಸಾಮಾನುಗಳನ್ನು ಹಾಕಿ ಕೈಯಾಡಿಸಿ ತೆಗೆಯಬೇಕು .

Last modified on 19/07/2018

Share this article

About Author

Super User