Print this page

ಒಂದು ಲೋಕಸಭೆ ಕ್ಷೇತ್ರ, ಮೂರು ಹಂತದ ಮತದಾನ: ಇತಿಹಾಸದಲ್ಲಿ ಇದೇ ಮೊದಲು!

ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಹಲವು ಹಂತಗಳಲ್ಲಿ ಮತದಾನ ,ಇತಿಹಾಸದಲ್ಲಿ ಇದೇ ಮೊದಲು!

ನವದೆಹಲಿ: ಸಾಮಾನ್ಯವಾಗಿ ಯಾವುದೇ ಒಂದು ರಾಜ್ಯದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುತ್ತದೆ. ಆದರೆ, ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುವುದನ್ನು ನಾವು ಕೇಳಿರಲು ಸಾಧ್ಯವೇ ಇಲ್ಲ. ಭಾರತೀಯ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಒಂದು ಘಟನೆಗೆ ಈ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ.

ಭದ್ರತೆಯ ಕಾರಣದಿಂದಾಗಿ ಅತ್ಯಂತ ಸೂಕ್ಷ್ಮ ಲೋಕಸಭೆ ಕ್ಷೇತ್ರವಾಗಿರುವ ಅನಂತನಾಗ್​ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಸಲಾಗುತ್ತಿದೆ. ಇಲ್ಲಿ ಚುನಾವಣೆ ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬುದನ್ನು ನೀವು ಊಹಿಸಬಹುದು. ಇದೇ ಕಾರಣದಿಂದಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ ತಿಳಿಸಿದ್ದಾರೆ.

ಅನಂತನಾಗ್​ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ವಿಧಾನಸಭೆ ಕ್ಷೇತ್ರಗಳಿದ್ದು, ಅನಂತನಾಗ್​, ಶೋಪಿಯಾನ್​, ಕುಲ್ಗಾಮ್​ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಒಳಗೊಂಡಿದೆ. ಈ ಜಿಲ್ಲೆಗಳಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆ ಹೆಚ್ಚಿದೆ. ಜತೆಗೆ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅನಂತನಾಗ್​ ಲೋಕಸಭೆ ಕ್ಷೇತ್ರದಲ್ಲಿ ಏಪ್ರಿಲ್​ 23, ಏಪ್ರಿಲ್​ 29 ಮತ್ತು ಮೇ 6 ರಂದು ಮತದಾನ ನಡೆಯಲಿದೆ.

ಇದನ್ನು ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಏಪ್ರಿಲ್​ 11 ರಂದು, ಶ್ರೀನಗರ ಮತ್ತು ಉಧಮ್​ಪುರ ಕ್ಷೇತ್ರಗಳಲ್ಲಿ ಏಪ್ರಿಲ್​ 18 ರಂದು ಮತ್ತು ಲಡಾಕ್​ ಕ್ಷೇತ್ರದಲ್ಲಿ ಮೇ 6 ರಂದು ಮತದಾನ ನಡೆಯಲಿದೆ.ಭಾನುವಾರ ಸಂಜೆ ಸುನಿಲ್​ ಅರೋರಾ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಲೋಕಸಭೆ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಘೋಷಿಸಿದ್ದರು. 

 
 

Share this article

About Author

Madhu