Print this page

ಎತ್ತಿನ ಹೊಳೆ ಯೋಜನೆ ಬಗ್ಗೆ ನಿಮಗೆ ಗೊತ್ತಾ?

ಎತ್ತಿನ ಹೊಳೆ ಯೋಜನೆ

ಹಾಸನ : ಎತ್ತಿನ  ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು. ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು. ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ.

ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ: ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಪ್ರದೇಶಗಳಿಗೆ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ) ಪೂರೈಸಲು ನಿರ್ಧರಿಸಲಾಗಿದೆ.

ಈ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ 4, ಕಾಡುಮನೆಹೊಳೆಗೆ 2, ಕೇರಿಹೊಳೆಗೆ 1, ಹೊಂಗಡಹಳ್ಳಕ್ಕೆ 1, ಒಟ್ಟು 8 ಬ್ಯಾರೇಜ್ಗಳನ್ನು ನಿರ್ಮಿಸಲಾಗುವುದು. ಈ ಬ್ಯಾರೇಜ್ಗಳಿಂದ ಎತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನವಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಹೂತು ಹಾಕಲಾಗುವ ಪೈಪ್ಗಳ ಮುಖಾಂತರ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುವುದು.ಸುಮಾರು 274 ಕಿ.ಮೀ. ಉದ್ದದ (ಗುರುತ್ವ) ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ ರೂ 12912.36 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯ ಏತಕಾಮಗಾರಿಗಳಿಗೆ ಮೊದಲನೆ ಹಂತವಾಗಿ ಒಟ್ಟು 235.65 ಹೆಕ್ಟೇರ್ ಭೂಮಿ ಅವಶ್ಯವಿದೆ. ಎರಡನೇ ಹಂತದ ಕಾಮಗಾರಿಗೆ 4900 ಹೆಕ್ಟೇರ್ ಭೂಮಿ ಅವಶ್ಯವಿದೆ. ಯೋಜನೆಯಿಂದ ಸುಮಾರು 68.35ಲಕ್ಷ ಜನ ಪ್ರಯೋಜನ ಪಡೆಯಲಿದ್ದಾರೆ. ಏತ ಕಾಮಗಾರಿಗೆ ಒಟ್ಟು 274.86 ಮೆಗಾ ವ್ಯಾಟ್ ವಿದ್ಯುತ್ತಿನ ಅವಶ್ಯವಿದೆ.

Last modified on 19/07/2018

Share this article

About Author

Madhu