Print this page

ಹುತಾತ್ಮ ಯೋಧ ಗುರು ಪತ್ನಿಗೆ ಸರ್ಕಾರಿ ಉದ್ಯೋಗ.ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ.

ಹುತಾತ್ಮ ಯೋಧ ಗುರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ.ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ.

 
 ಮಂಡ್ಯ: ನಿನ್ನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಗುರು ಅವರ ಪತ್ನಿಗೆ ಸರ್ಕಾರಿ ನೌಕರಿಯ ಭರವಸೆಯನ್ನು ಸಚಿವ ಪುಟ್ಟರಾಜು ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಜೊತೆ ಮಾತನಾಡಿ ಯೋಧ ಗುರು ಅವರ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಆರ್ಥಿಕ ಸಹಾಯ ಕೊಡಿಸುವುದಾಗಿ ಅವರು ಹೇಳಿದ್ದಾರೆ. ಪುಟ್ಟರಾಜು ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.ಈಗಾಗಲೇ ಜಿಲ್ಲಾಧಿಕಾರಿಗಳು ಗುರು ಅವರ ಹುಟ್ಟೂರು ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮಕ್ಕೆ ತೆರಳಿ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮತ್ತು ಗುರು ಮೃತ ದೇಹವನ್ನು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿದ್ದಾರೆ ಎಂದು ಪುಟ್ಟರಾಜು ಹೇಳಿದ್ದಾರೆ.
 
ಗುರು ಅವರಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನೂ ಪರಿಶೀಲನೆ ನಡೆಸದೆ, ವಿಳಂಬ ಮಾಡದೇ ಅವರ ಕುಟುಂಬಕ್ಕೆ ಸೇರಬೇಕಾದ ಹಣವನ್ನು ಎಲ್​ಐಸಿ ಪಾವತಿಸಿದೆ.ಹುತಾತ್ಮ ಯೋಧ ಗುರು ನಿವಾಸಕ್ಕೆ ತೆರಳಿದ ಮಂಡ್ಯದ ಎಲ್ಐಸಿ ವ್ಯವಸ್ಥಾಪಕ ನಾಗರಾಜ್ ರಾವ್, ಸಚಿವ ಡಿ.ಸಿ ತಮ್ಮಣ್ಣ ಅವರ ಸಮ್ಮುಖದಲ್ಲಿ ವಿಮಾ ಹಣದ ಚೆಕ್​ ಅನ್ನು ಹಸ್ತಾಂತರ‌ ಮಾಡಿದರು. ಗುರು ಅವರ ವಿಮೆ ಮೊತ್ತ 3,82,000 ರೂಪಾಯಿಗಳ ಚೆಕ್ ಅನ್ನು ಗುರು ತಂದೆ ಹೊನ್ನಯ್ಯ ಅವರಿಗೆ ನೀಡಿದರು.ಯೋಧ ಗುರು ಅವರು ಕಲಾವತಿ ಅವರನ್ನು ಆರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ರಜೆ ಹಾಕಿ ಬಂದಿದ್ದ ಅವರು ಫೆಬ್ರವರಿ 10 ರಂದು ಪುನಃ ಸೇವೆಗೆ ತೆರಳಿದ್ದರು. ಆದರೆ ಗುರು ಇನ್ನೆಂದೂ ಮರಳುವುದಿಲ್ಲವೆಂದು ಗೊತ್ತಾದ ಗುರು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Share this article

About Author

Madhu