ಇತಿಹಾಸ ಪ್ರಸಿದ್ಧಿ ಮೇಲುಕೋಟೆ ದೇವಾಲಯ ಮತ್ತು ವೈರಮುಡಿ ಬಗ್ಗೆ ನಿಮಗೆ ತಿಳಿಯದ ಮಾಹಿತಿ

ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀಚೆಲುವನಾರಯಣ ಸ್ವಾಮಿಗೆ ವೈರಮುಡಿ ಉತ್ಸವ ,ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದೆ

ಈ ಉತ್ಸವವನ್ನು ನೇರವಾಗಿ ಅಥವಾ ಟಿವಿಯಲ್ಲಿ ನೋಡುವವರು ಇದರ ಹಿನ್ನಲೆ, ಪೂರ್ವ ಇತಿಹಾಸ ತಿಳಿದು ನೋಡಿದರೆ ತಮ್ಮ ಧಾರ್ಮಿಕ ಮತ್ತು ದೈವಿಕ ಮನೋಭಾವ ಇಮ್ಮಡಿಗ್ಳುತ್ತದೆ. ಇದು ಕೇವಲ ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣವಾಗಿಯೂ ಎಲ್ಲರನ್ನೂ ತನ್ನತ್ತ ಸೆಳೆಯುವ ತಾಣವೇ ಮೇಲುಕೋಟೆ. ಬೆಟ್ಟಗುಡ್ಡಗಳು. ಅವುಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹತ್ತಾರು ದೇಗುಲಗಳು. ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು. ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು, ಇಂತಹ ನಿಸರ್ಗ ಸುಂದರ ವಿಹಂಗಮ ನೋಟ ಮೇಲುಕೋಟೆಗೆ ತೆರಳಿದಾಗ ತಿಳಿಯುತ್ತದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ(ಶ್ರೀರಂಗ, ತಿರುಪತಿ, ಕಾಂಚೀಪುರ, ಮೇಲುಕೋಟೆ)ಗಳಲ್ಲಿ ಒಂದಾಗಿದೆ.

ಮೇಲುಕೋಟೆಯಲ್ಲಿ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಾಗಿದೆ. ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಯುತ್ತದೆ.

ಪುರಾಣ_ಮತ್ತು_ಇತಿಹಾಸ
ವೈರಮುಡಿ ಎಂದರೆ ವಜ್ರ ಖಚಿತ ಕಿರೀಟ ಎಂದರ್ಥ, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವ ನಾರಯಣನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದು ಮೂಲೆಯ ಪುರಾಣವಾದರೆ, ಮತ್ತೊಂದೆಡೆ ವೈಕುಂಠದಿಂದ ಹಿರಣ್ಯಕಶಿಪುವಿನ ಮೊಮ್ಮಗ ಅಂದರೆ ಹಿರಣ್ಯಕಶಿಪುವಿನ ಮಗ ಭಕ್ತ ಪ್ರಹ್ಲಾದನ ಮಗ ವಿರೋಚನ ಎಂಬುವವನು ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನರ ನಂಬಿಕೆ. ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭದಲ್ಲಿ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವ. ಇದು ಹೇಗೆ ಆಚರಣೆಗೆ ಬಂದಿತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿರುವದನ್ನು ನಾವು ತಿಳಿದುಕೊಳ್ಳೋಣ.

ಕ್ಷೇತ್ರ ಪುರಾಣದ ಅನ್ವಯ ಒಮ್ಮೆ ತ್ರೇತಾಯುಗದಲ್ಲಿ ಅಯೋಧ್ಯೆಯ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ತಮ್ಮ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತದೆ ಸ್ಥಳ ಪುರಾಣ.

ಮತ್ತೊಂದು_ಪುರಾಣ
ಕೃಷ್ಣನ ಅವತಾರದ ಒಂದು ಕಾಲದಲ್ಲಿ ಭಕ್ತ ಪ್ರಹ್ಲಾದನ ಮಗನಾದ "ವಿರೋಚನ" ಕ್ಷೀರಾಭಿಶಾಯಿಯಾಗಿದ್ದ ಕೃಷ್ಣನ ಸೇವೆಗೆ ತಾನೂ ಪ್ರತಿನಿತ್ಯ ಪ್ರವೇಶ ಮಾಡಿ ಸ್ವಾಮಿಯ ಕೈಂಕಾರ್ಯಗಳನ್ನು ನೆರವೇರಿಸಿ ಸಂತೃಪ್ತಗೊಳ್ಳುತಿದ್ದನು. ಅದರೆ ವಿರೋಚನನು ಸಮಯ ಸಾಧಿಸಿ ಶ್ರೀಕೃಷ್ಣ ನಿದ್ರಿಸುವ ಸಮಯದಲ್ಲಿ ಅವನ ಕಿರೀಟವನ್ನು ಅಪಹರಿಸಿ, ಭೂಲೋಕಕ್ಕೆ ತೆಗೆದುಕೊಂಡು ಬಂದು  ಅಲ್ಲಿಂದ ಮತ್ತೆ ಪಾತಾಳ ಲೋಕದಲ್ಲಿ ಅಡಗಿಸಿಟ್ಟನು. ಇದನ್ನು ಗಮನಿಸುತ್ತಿದ್ದ ಗರುಡನು ವಿರೋಚನನೊಡನೆ ಹೋರಾಡಿ ಜಯಿಸಿ ಈ ಕಿರೀಟವನ್ನು ತರುತ್ತಿರುವಲ್ಲಿ ಗರುಡನು ತಾನು ತಂದ ಕಿರೀಟ ಶ್ರೀಕೃಷ್ಣನಿಗೆ ಧರಿಸಲು ಅದು ಸರಿಯಾಗಲಿಲ್ಲ. ಆಗ ಶ್ರೀಕೃಷ್ಣನೊಡನೆ ಹೋಗಿ ಆತನ ಆರಾಧ್ಯಾ ದೇವರಾದ ಶ್ರೀಚಲುವನಾರಾಯಣಸ್ವಾಮಿಗೆ ಧರಿಸಲು ಕಿರೀಟ ಸರಿಯಾಗಿ ಚೆಲುವನಾರಯಣಸ್ವಾಮಿಗೆ ಸರಿಹೊಂದಿತು. ಶತಯೋಜನೆ ವಿಸ್ತೀರ್ಣವುಳ್ಳ ಭಗವಂತನ ಕಿರೀಟ ಶ್ರೀಚೆಲುವ ನಾರಾಯಣ ಸ್ವಾಮಿಗೆ ಹೊಂದಿದ್ದನ್ನು ಕಂಡು ವೈನತೆಯ(ಗರುಡ)ನ್ನು ಎಲ್ಲಿ ನಿನ್ನ ಮಹಿಮೆ ಎಂದು ಇದು ಭೂಲೋಕದ ಜನರಿಗೆ ಈ ಮೂಲಕ ಭಗವಂತನ ಆಸೆಯಿಂದ ಲಭ್ಯವಾಯಿತೆಂದು ಹೇಳಿ ಶ್ರೀಚೆಲುವನಾರಾಯಣ ಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತು ಉತ್ಸವ ಮಾಡಿದ ಕಾರಣ ವೈರಮುಡಿ(ವೈರ ಅಂದರೆ ವಜ್ರ, ಮುಡಿ ಎಂದರೆ ಕಿರೀಟ) ಎಂದು ಹೆಸರಾಗಿ ಪುರಾತನ ಕಾಲದಿಂದಲೂ ಜನರ ಬಾಯಲ್ಲಿ ವೈರಮುಡಿಯಾಗಿದೆ.

ಮೈಸೂರು ಸಂಸ್ಥಾನ ಈ ಚೆಲುವ ನಾರಾಯಣನ ಮೇಲೆ ವಿಶೇಷ ಭಕ್ತಿ ಭಾವ ಹೊಂದಿದ್ದರು. ಹಾಗಾಗಿ ತಲೆತಲಾಂತರದಿಂದ ಸ್ವಾಮಿಗೆ ಹಲವಾರು ಆಭರಣಗಳನ್ನು ವಿಶೇಷ ಸೇವೆಗಳನ್ನು ಸಲ್ಲಿಸುತ್ತ ಬಂದಿದ್ದಾರೆ. ವೈರಮುಡಿ, ರಾಜಮುಡಿ, ಕೃಷ್ಣರಾಜ ಮುಡಿ ಸಹ ಮೈಸೂರು ಒಡೆಯರ್ ವಂಶಸ್ಥರೆ ಕಾಪಾಡಿಕೊಂಡು ಬಂದಿದ್ದರು. ಕೃಷ್ಣರಾಜಮುಡಿ ಕೃಷ್ಣರಾಜ ಒಡೆಯರ್ ಮಾಡಿಸಿಕೊಟ್ಟದ್ದು. 
ಮೈಸೂರು ಅರಸರ ಅರಮನೆಯಲ್ಲಿದ್ದ ಈ ಎಲ್ಲಾ ಕಿರೀಟಗಳನ್ನು ಸಕಲ ರಾಜ ಮರ್ಯಾದೆಯೊಂದಿಗೆ ಮೇಲುಕೋಟೆಗೆ ತರಲಾಗುತ್ತಿತ್ತು. ಇಂದು ಈ ವೈರಮುಡಿ ಕಿರೀಟದ ಭದ್ರತೆಯ ದೃಷ್ಠಿಯಿಂದ ವೈರಮುಡಿ, ರಾಜಮುಡಿ, ಕೃಷ್ಣರಾಜಮುಡಿ ಕಿರೀಟಗಳನ್ನು ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ. ಜಾತ್ರಾ ಅವಧಿಯಲ್ಲಿ ಚೆಲುವರಾಯನನ್ನು ಅಲಂಕರಿಸುವ ಮತ್ತೂಂದು ಕಿರೀಟ ರಾಜಮುಡಿ. ಇದನ್ನು ಮೈಸೂರು ಅರಸರಾದ ರಾಜ ಒಡೆಯರ್ ದೇಗುಲಕ್ಕೆ ಸಮರ್ಪಿಸಿದ್ದಾರೆ. ಈ ಕಿರೀಟಗಳೊಂದಿಗೆ ಶಂಖ, ಚಕ್ರ, ಗದಾ, ಪದ್ಮ ಸೇರಿದಂತೆ 16 ವಜ್ರಖಚಿತ ಆಭರಣಗಳನ್ನೂ ನೀಡಿದ್ದಾರೆ. ಇವು ಹತ್ತೂ ದಿನಗಳ ಕಾಲ ಸ್ವಾಮಿಯನ್ನು ಅಲಂಕರಿಸಿರುತ್ತವೆ. ಇವುಗಳೊಂದಿಗೆ ಅಪೂರ್ವ ಮುತ್ತು ಮುಡಿಕಿರೀಟ ಹಾಗೂ ಮುತ್ತಿನಹಾರಗಳು ಸ್ವಾಮಿಯ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಒಮ್ಮೆ ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ನಿಗದಿಯಾದ ಪಾಲ್ಗುಣ ಮಾಸದ ಪುಷ್ಯನಕ್ಷತ್ರದಂದೇ ವೈರಮುಡಿ ಕಿರೀಟ ಧರಿಸಿ ಅಲಂಕರಿಸುವ ಮೂಲಕ ಶ್ರೀರಾಮಾನುಜ ಚಾರ್ಯರು ತಮ್ಮ ಮನೋಭಿಲಾಷೆ ಈಡೇರಿಸಿಕೊಂಡು ಸಂಭ್ರಮಿಸಿದರಂತೆ. 
ಆದಿಶೇಷನೇ ತ್ರೇತಾಯುಗದಲ್ಲಿ ಸಹೋದರ ಲಕ್ಷ್ಮಣನಾಗಿ, ದ್ವಾಪರಯುಗದಲ್ಲಿ ಬಲಭದ್ರನಾಗಿ ಅವತರಿಸಿದ್ದ. ಶ್ರೀವೈಷ್ಣವನ ವಿಶ್ವಾಸದ ಪ್ರಕಾರ ಆದಿಶೇಷನ ಮುಂದಿನ ಅವತಾರ ಕಲಿಯುಗದ ಶ್ರೀರಾಮಾನುಜರು ಎನ್ನುತ್ತದೆ ಪುರಾಣ.
ಹಿಂದೆಮ್ಮೊ ಹಲವು ವರ್ಷಗಳು ಕಾರಣಾಂತರಗಳಿಂದ ವೈರಮುಡಿ ಉತ್ಸವ ನಿಂತಿಹೋಗಿತ್ತು ಅದನ್ನು ಮತ್ತೆ ಆರಂಭಿಸಿದವರು ಇದೇ ರಮಾನುಜಾಚಾರ್ಯರು ಎಂಬ ಐತಿಹ್ಯವಿದೆ.

ಹತ್ತು_ದಿನದ_ವೈರಮುಡಿ_ಉತ್ಸವದ_ವಿಶೇಷತೆ
ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಸ್ವಾತಂತ್ರ್ಯ ಬಂದ ನಂತರ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಗಿದೆ. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭದಲ್ಲಿ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಹತ್ತಿರಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.
ವೈರಮುಡಿಯ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14ಆಭರಣಗಳನ್ನು ಧರಿಸಲಾಗುತ್ತದೆ.
ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ. 
1)ಮೊದಲ ದಿನ ಸಂಜೆ ನಡೆಯುವ ಕಲ್ಯಾಣೋತ್ಸವದ ಮೂಲಕ ಉತ್ಸವ ಆರಂಭವಾಗುತ್ತದೆ. ಧ್ವಜಾರೋಹಣದ ದಿನ ಗರುಡನಿಗೆ ಪೂಜೆ ಸಲ್ಲಿಸುವುದರೊಂದಿಗೆ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲಾಗುವುದು. ಆ ದಿನ ಚೆಲುವರಾಯಸ್ವಾಮಿ ಹಂಸವಾಹನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ.
2)ಎರಡನೆಯ ದಿನ ಶ್ರೀದೇವಿ ಭೂದೇವಿಯರೊಂದಿಗೆ ಶೇಷವಾಹನದ ಸೊಬಗು ನೋಡಬಹುದು.
3)ಮೂರನೆಯ ದಿನ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬಂಗಾರದ ಪಲ್ಲಕ್ಕಿಯಲ್ಲಿ, ನಾಗವಲ್ಲಿ ಮಹೋತ್ಸವದ ಮೆರವಣಿಗೆ ನಡೆಯುತ್ತದೆ. ಅಲ್ಲದೆ ಲೋಕಕಲ್ಯಾಣಾರ್ಥ ಹೋಮ ಕೂಡ ಮಾಡಲಾಗುತ್ತದೆ.
4)ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ. 
5)ಐದನೆಯ ದಿನ ಸಂಜೆ ದೇಶಿಕರ ಸನ್ನಿಧಿಯಲ್ಲಿ ಪ್ರಹ್ಲಾದ ಪರಿಪಾಲನೋತ್ಸವ ನಡೆಯುತ್ತದೆ. ಅಂದು ರಾತ್ರಿ ಬಂಗಾರದ ಗರುಡವಾಹನದಲ್ಲಿ ಅಲಂಕಾರಗೊಂಡ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ.
6)ಢ್ಯಭ್ಯ ಆರನೆಯ ದಿನ ಗಜೇಂದ್ರಮೋಕ್ಷ ಅಲಂಕಾರದ ವೈಭೋತ್ಸವ ಬಳಿಕ ಆನೆ, ಕುದುರೆ ಮಹೋತ್ಸವವು ನಡೆಯುತ್ತದೆ.
7)ಏಳನೆಯ ದಿನ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಹಾಗೂ ರಾಮಾನುಜರೊಂದಿಗೆ ಮಹಾರಥೋತ್ಸವವು ನಡೆಯುತ್ತದೆ. ರಾತ್ರಿ ಬಂಗಾರದ ಪಲ್ಲಕಿ ಸೇವೆಯೂ ಜರುಗುತ್ತದೆ.
8)ಎಂಟನೆಯ ದಿನದಂದು ಕಲ್ಯಾಣಿಯಲ್ಲಿ ಚೆಲುವರಾಯಸ್ವಾಮಿಯ ತೆಪ್ಪೋತ್ಸವವು ನಡೆಯುತ್ತದೆ. 
9)ಒಂಭತ್ತನೆಯ ದಿನ ತೀರ್ಥಸ್ನಾನ, ಅವಭೃತ ನಂತರ ಸಂಜೆ ಪರಕಾಲ ಮಠದಲ್ಲಿ ವೈಭವದಿಂದ ಪಟ್ಟಾಭಿಷೇಕ ಜರುಗುತ್ತದೆ.
10)ಹತ್ತನೆಯ ದಿನ ಜಾತ್ರೆಯ ಅಂತಿಮ ದಿನವಾಗಿದ್ದು ಅಂದು ಶ್ರೀಚೆಲುವರಾಯಸ್ವಾಮಿಗೆ ಮಹಾಭಿಷೇಕ ನೆರವೇರುತ್ತದೆ. ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.
ವೈರಮುಡಿ ಬ್ರಹ್ಮೋತ್ಸವದ ಮುಗಿದ ನಂತರವೂ ಜನಜಂಗುಳಿ ಕಡಿಮೆಯಾಗುವುದಿಲ್ಲ. ಇಲ್ಲಿ ವರ್ಷಪೂರ್ತಿ ದೇಶ, ವಿದೇಶದಿಂದ ಪ್ರವಾಸಿಗರು ಬರುತ್ತಿರುತ್ತಾರೆ. ಇಲ್ಲಿ ಹಲವಾರು ದೇಗುಲಗಳು, ಕಲ್ಯಾಣಿಗಳು, ಕೆರೆಗಳು ಇರುವುದನ್ನು ನಾವು ಕಾಣಬಹುದು,

ಮೇಲುಕೋಟೆ_ಚೆಲುವನಾರಯಣನ_ಬೆಟ್ಟದಲ್ಲಿರುವ_ಇತರ_ದೇವಸ್ಥಾನಗಳು
ವಿಶಿಷ್ಟ ವಾಸ್ತುಶಿಲ್ಪದ ವಿಶಾಲವಾದ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯದ ನಡುವೆ ಬದರಿ ನಾರಾಯಣ ದೇವಾಲಯ, ಪಟ್ಟಾಭಿರಾಮ ದೇವಾಲಯ, ಶಾಂಡಿಲ್ಯದ ಸನ್ನಿಧಿ, ಕುಲಶೇಖರ್ ಆಳ್ವಾರ್ ಸನ್ನಿಧಿ, ಜೀಯರ್ ಸನ್ನಿಧಿ, ವೇದಾಂತದೇಶಿಕರ ಸನ್ನಿಧಿ, ಕೇಶವ ದೇವರ ಸನ್ನಿಧಿ, ನಂಜೀಯರ್ ಸನ್ನಿಧಿ, ಮಾರಮ್ಮನ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ನಮ್ಮಾಳ್ವಾರ್ ಗುಡಿ, ತಿರುಮಂಗೈ ಆಳ್ವಾರ್ ಗುಡಿ, ಪೇಟೆ ಕೃಷ್ಣದೇವರ ಗುಡಿ, ಸೀತಾರಣ್ಯ ಕ್ಷೇತ್ರ, ಕರಣಿಕ ನಾರಾಯಣನ ಗುಡಿ, ವೆಂಕಟೇಶ್ವರ ಗುಡಿ, ಪರಕಾಲ ಮಠ, ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, ಆದಿಶೇಷ ಸನ್ನಿಧಿ, ಪಂಚ ಭಾಗವತ ಕ್ಷೇತ್ರ ಸನ್ನಿಧಿ, ಪೇಯಾಳ್ವಾರ್ ಸನ್ನಿಧಿ, ವರಾಹ ದೇವಾಲಯ, ಬಿಂದು ಮಾಧವ ದೇವಾಲಯ, ಹನುಮಾನ್ ದೇವಾಲಯ, ಹಯಗ್ರೀವ ಸನ್ನಿಧಿ, ಲಕ್ಷ್ಮಿ ನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ದಿ ವಿನಾಯಕ (ಏಕಶಿಲೆ ಗಣಪ), ಕೇಶವ (ನಯನಕ್ಷೇತ್ರ), ಶನೇಶ್ವರ ಗುಡಿ, ಕವಿಗಲ್ ಆಂಜನೇಯ ಗುಡಿ, ಕರಮೆಟ್ಟಿಲು ಆಂಜನೇಯ ಗುಡಿ, ಮೂಡ ಬಾಗಿಲು ಆಂಜನೇಯ ಗುಡಿ, ರಾಯರಗೋಪುರ ಆಂಜನೇಯ ಗುಡಿ, ಚೋಳರ ಬಂಡೆ, ಶ್ರೀನಿವಾಸ ದೇವಾಲಯ, ಸುಗ್ರೀವನ ಗುಡಿ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ), ಹೊರತಮ್ಮನ ದೇವಾಲಯ, ಶಿವನ ಗುಡಿ(ಉಳ್ಳಿಬಾವಿ) ಮೊದಲಾದ ದೇವಾಲಯಗಳಿವೆ.

ಏನಿದೆ_ಮೇಲುಕೋಟೆಯಲ್ಲಿ?
ವಿಶಾಲ ಭವ್ಯ ಕಲ್ಯಾಣಿ, ತೆಪ್ಪಕೊಳ, ಅಕ್ಕತಂಗಿಕೊಳ(ಚಲುವರಸಿಯರ ಕೊಳ), ನಿಂಗಣ್ಣನ ಕಟ್ಟೆ, ನಕ್ಷತ್ರಕೊಳ, ವೃತ್ತಕೊಳ, ಬಸವರಾಜನಕೊಳ, ವೇದಪುಷ್ಕರಣಿ, ಚಿಕ್ಕಯ್ಯನಕೊಳ, ದರ್ಭತೀರ್ಥ, ಯಾದವತೀರ್ಥ, ಪಲಾಶ ತೀರ್ಥ, ಮೈತ್ರೇಯ ತೀರ್ಥ, ಪದ್ಮತೀರ್ಥ, ನಾರಾಯಣ ತೀರ್ಥ, ತೊಟ್ಟಿಲಮಡು, ಹಾಲುಕೊಲ, ಭಟ್ಟರಕೊಳ, ನರಸಿಂಹಮಡು(ಬೆಟ್ಟದಕೊಳ), ಅಜ್ಜನಕಟ್ಟೆ, ಅಕ್ಕತಂಗಿಕೊಳ(ಗಿರಿ ಪ್ರದಕ್ಷಿಣೆ), ಒಕ್ಕರಣೆ(ಪಂಚಬಾವಿ), ಒಂಭತ್ತು ಕಲ್ಲು ಬಾವಿ, ಹೊಸಬಾವಿ, ಛತ್ರಿಕೊಳ, ಸಂತೆಮಡು, ಗಣಪತಿ ಕಟ್ಟೆ, ಪುಟ್ಟನರಸೀಕೊಳ, ಸಿಹಿನೀರುಕೊಳ, ಕೆಳಗಿನ ಚಿಕ್ಕಯ್ಯನಕೊಳ ಮೊದಲಾದ ನೀರಿನಕೊಳಗಳು ಹಾಗೂ ದಳವಾಯಿ ಕೆರೆ, ಹೊಸಕೆರೆ, ಯಾದವ, ಹೆಬ್ಬಳ್ಳ ಕೆರೆಗಳಿವೆ, ಯತಿರಾಜ ಮಠ, ವಾನಮಾಮಲೈ ಮಠ, ಪರಕಾಲ ಮಠ, ಅಹೋಬಲ ಮಠ, ಆಂಡವನ್ ಆಶ್ರಮಂ, ಕಂಚಿವಾದ ಕೇಸರಿ ಆಳಹಿಯ ಮಣವಾದ ಮಠ, ತ್ರಿದಂಡಿ ಚಿನ್ನಜೀಯಾರ್ ಮಠ, ತಿರುಪತಿ ಪೆರಿಯ ಜೀಯಾರ್ ಮಠ, ಬೈರಾಗಿ ಮಠಗಳಿವೆ. ಅಲ್ಲದೆ ಮೇಲುಕೋಟೆಯಲ್ಲಿ ಪ್ರೇಕ್ಷಣೀಯ ತಾಣಗಳಾಗಿ ಪ್ರವಾಸಿಗರನ್ನು ರಾಯಗೋಪುರ(ಪಟ್ಟಣದ ಬಾಗಿಲು), ನಯನಕ್ಷೇತ್ರ(ಗುಹಾಂತರ ದೇವಾಲಯ), ತಾರ್ಕ್ಷ್ಯ ಕ್ಷೇತ್ರ, ಏಕಶಿಲಾ ಗಣಪತಿ, ಅಕ್ಕತಂಗಿಯರ ಕೊಳ, ಭುವನೇಶ್ವರಿ ಮಂಟಪ, ದಳವಾಯಿಕೆರೆ, ಹೊಗರಮ್ಮನ ಗುಡಿ ಗಮನಸೆಳೆಯತ್ತದೆ.

ವಿಶೇಷ_ದಿನ
ಮೀನಮಾಸ ಹಸ್ತನಕ್ಷತ್ರದ ದಿವಸ ಶ್ರೀನಾರಾಯಣಸ್ವಾಮಿಯ ಜಯಂತಿಯಂದು ಅವಭೃತಸ್ನಾನ ನಡೆಯುತ್ತದೆ. ಅವಭೃತಸ್ನಾನದ ದಿನದಿಂದ ಹಿಂದೆ ಒಂಭತ್ತು ದಿವಸದ ಉತ್ಸವ ನಡೆಯುತ್ತದೆ. ಇದರಲ್ಲಿ 4ನೇ ತಿರುನಾಳ್ ದಿವಸ ವೈರಮುಡಿ ಕಿರೀಟ ಧಾರಣ ಮಹೋತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಎರಡು ವೇಳೆಯು ಯಾಗಶಾಲೆಯಲ್ಲಿ ಹೋಮ ಹವನ, ವೇದಾಪಾರಾಯಣ ಮತ್ತು ದಿವ್ಯಪ್ರಬಂಧ ಪಾರಾಯಣ ನಡೆಯುತ್ತದೆ. ವರ್ಷದಲ್ಲಿ ನಡೆಯುವ ಎಲ್ಲಾ ಉತ್ಸವಗಳಲ್ಲಿ ಇದು ಪ್ರಧಾನವಾದುದು. ಅಂದು ವೈರಮುಡಿ ಕಿರೀಟ ಧರಿಸಿದ ಸ್ವಾಮಿಯನ್ನು ಎಷ್ಟೆ ದೂರದಲ್ಲಿ ಯಾವ ದಿಕ್ಕಿನಲ್ಲಿದ್ದರೂ ಭಕ್ತಾದಿಗಳು ದರ್ಶನ ಮಾಡಬಹುದು. ಗರುಡವಾಹನದಲ್ಲಿ ವೈರಮುಡಿಯಿಂದ ಅಲಂಕೃತವಾದ ಸ್ವಾಮಿಯನ್ನು ಭಕ್ತರನ್ನು ಅನುಗ್ರಹಿಸಲೆಂದು ನಾಲ್ಕು ಕಡೆಗೂ ತಿರುಗಿಸುತ್ತಾ ಸೇವೆ ಕೊಡುವ ವಾಡಿಕೆ ಈಗಲೂ ನಡೆದುಕೊಂಡು ಬಂದಿದೆ.

ಈ ಪ್ರತಿಷ್ಠಿತ ವೈರಮುಡಿ ಬ್ರಹ್ಮೋತ್ಸವವನ್ನು ವೀಕ್ಷಿಸಲು ದೇಶವಿದೇಶಗಳಿಂದಲೂ ಜನರು ಬರುತ್ತಾರೆ. ವೈರಮುಡಿ ಉತ್ಸವದ ದಿನ ಒಂದು ಲಕ್ಷಕ್ಕೂ ಮೇಲ್ಪಟ್ಟುಭಕ್ತಾದಿಗಳು ಸ್ವಾಮಿಯ ದರ್ಶನ ಪಡೆಯತ್ತಾರೆ. ಹಿಂದೆ ಮೈಸೂರು ಅರಸರ ಅರಮನೆಯಲ್ಲಿದ್ದ ಈ ಕಿರೀಟವನ್ನು ಸಕಲ ರಾಜ ಮರ್ಯಾದೆಯೊಂದಿಗೆ ಮೇಲುಕೋಟೆಗೆತರಲಾಗುತ್ತಿತ್ತು. ಈ ವೈರಮುಡಿ ಕಿರೀಟದ ಭದ್ರತೆಯ ದೃಷ್ಠಿಯಿಂದ ವೈರಮುಡಿ, ರಾಜಮುಡಿ, ಕೃಷ್ಣರಾಜಮುಡಿ ಕಿರೀಟಗಳನ್ನು ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ. ವೈರಮುಡಿ ದಿವಸ ಬೆಳ್ಳಿಗ್ಗೆ ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿ ತಿರುವಾಭರಣಗಳನ್ನು ಮೇಲುಕೋಟೆಗೆ ತರುವ ದಾರಿಯುದ್ಧಕ್ಕೂ ಭಕ್ತಾಧಿಗಳಿಂದ ಪೂಜಿಸಲ್ಪಡುತ್ತದೆ. ಇವರೆಡು ತಿರುವಾಭರಣಗಳನ್ನು ಮರ್ಯಾದೆಯೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಊರಿನಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಬರಮಾಡಿಕೊಳ್ಳುವ ಸಂಪ್ರದಾಯ ಇಂದಿಗೂ ನಡೆದು ಬಂದಿದೆ. 4ನೇ ತಿರುನಾಳ್ ದಿವಸ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಚಲುವನಾರಾಯಣಸ್ವಾಮಿಗೆ ಧರಿಸಿ ಉತ್ಸವವಾಗುತ್ತದೆ. ಮಾರನೆಯ ಬೆಳ್ಳಿಗ್ಗೆ ರಾಜಮುಡಿ ತಿರುವಾಭರಣ ದೇವಸ್ಥಾನದಲ್ಲಿಯೆ ಇದ್ದು, 7 ದಿವಸಗಳ ಕಾಲ ಸ್ವಾಮಿಗೆಧಾರಣೆಯಾಗಿ ಕೊನೆಯಲ್ಲಿ ಮಂಡ್ಯ ಜಿಲ್ಲಾ ಖಜಾನೆಗೆ ಸೇರುತ್ತದೆ. ಈ ವೈರಮುಡಿಯನ್ನು ದೇವರು ಧರಿಸಿಕೊಂಡಾಗ ಮಾತ್ರ ದರ್ಶನ ಮಾಡಿಕೊಳ್ಳಬೇಕು. ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಜನರಲ್ಲಿ ಇದೆ. ರಾಮಾವತಾರದಲ್ಲಿ ಕೈಕೇಯಿಯ ಹಠಮಾರಿತನ ಪ್ರಸಂಗದಿಂದ ಪಟ್ಟಾಭಿಷೇಕಕ್ಕೆ ನಿಗದಿಯಾದ ದಿನ ರಾಮನು ವನವಾಸಕ್ಕೆತೆರಳಿದನು ಆದಿಶೇಷನೆ ಲಕ್ಷ್ಮಣನಾಗಿ ಅವತರಿಸಿದ್ದು, ಈ ಕಲಿಯುಗದಲ್ಲಿ ಆದಿಶೇಷನೆ ರಾಮಾನುಜನಾಗಿ ಜನಿಸಿದ ಆಚಾರ್ಯರು ರಾಮಪ್ರಿಯನಾದ ಶ್ರೀಚಲುವನಾರಾಯಣಸ್ವಾಮಿಗೆ ಪಟ್ಟಾಭಿಷೇಕಕ್ಕೆ ಗೊತ್ತುಮಾಡಿ ಪುಷ್ಯ ನಕ್ಷತ್ರದ ಶುಭ ದಿನದಿಂದಲೆ ವೈರಮುಡಿ ಕಿರೀಟವನ್ನು ಧರಿಸಿ ಉತ್ಸವ ಮಾಡಿದರು(ಮೀನಪುಷ್ಯ). ಈಗಲೂ ಪಾಲ್ಗುಣ ಪುಷ್ಯ ನಕ್ಷತ್ರ(ಮೀನ)ದಲ್ಲೆ ವೈರಮುಡಿ ಉತ್ಸವ. ವೈರಮುಡಿ ಉತ್ಸವದ ಅಂಗವಾಗಿ ಶ್ರೀಚಲುವನಾರಾಯಣಸ್ವಾಮಿಯವರಿಗೆ ರಥೋತ್ಸವ, ತೆಪ್ಪೋತ್ಸವ ಸಹ ನಡೆಯುತ್ತದೆ.

ಸಾರಿಗೆ_ವ್ಯವಸ್ಥೆ
ವೈರಮುಡಿ ಬ್ರಹ್ಮೋತ್ಸವ ವೀಕ್ಷಿಸಲು ಬರುವ ಸಹಸ್ರಾರು ಭಕ್ತಾದಿಗಳಿಗೆ ಜಿಲ್ಲಾ ಆಡಳಿತದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ನೈರ್ಮಲೀಕರಣದ ವ್ಯವಸ್ಥೆ ಆರಕ್ಷಕ ಬಂದೋಬಸ್ತ್, ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮೇಲುಕೋಟೆಯು ಯಾವುದೇ ಮುಖ್ಯರಸ್ತೆಯಲ್ಲಿ ಬರುವುದಿಲ್ಲ. ಈ ಪುಣ್ಯಕ್ಷೇತ್ರವು ಮೈಸೂರು ನಾಗಮಂಗಲ ಮಾರ್ಗದಲ್ಲಿ ಜಕ್ಕನಹಳ್ಳಿಯಿಂದ ಪಶ್ಚಿಮಕ್ಕೆ 8 ಕಿ.ಮೀ. ಅಂತರದಲ್ಲಿ ಎತ್ತರದ ಬೆಟ್ಟದ ಮೇಲಿದೆ. ಮೇಲುಕೋಟೆಗೆ ಮಂಡ್ಯ ನಗರದಿಂದ 35 ಕಿ.ಮೀ ಮೈಸೂರಿನಿಂದ 51 ಕಿ.ಮೀ, ನಾಗಮಂಗಲದಿಂದ 29 ಕಿ.ಮೀ, ಕೆ.ಆರ್.ಪೇಟೆಯಿಂದ 24 ಕಿ.ಮೀ. ದೂರದಲ್ಲಿದೆ. ಎಲ್ಲಾ ಕಡೆಯಿಂದಲೂ ಮೇಲುಕೋಟೆಗೆ ಬರಲು ಬಸ್ಸುಗಳ ವ್ಯವಸ್ಥೆ ಇದೆ.

ಮೇಲುಕೋಟೆ_ವಿಳಾಸ
ಕಾರ್ಯನಿರ್ವಾಹಕ ಅಧಿಕಾರಿ,
ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ,
ಪಾಂಡವಪುರ ತಾಲ್ಲೋಕು, ಮಂಡ್ಯ ಜಿಲ್ಲೆ, ಕರ್ನಾಟಕ
ಮೇಲುಕೋಟೆ - 571431

☎️ದೂರವಾಣಿ ಸಂಖ್ಯೆ :
08236-299839
?ಇ-ಮೇಲ್ ವಿಳಾಸ :
This email address is being protected from spambots. You need JavaScript enabled to view it.

#ಪೂಜಾ_ಸಮಯ
ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ವೇಳೆ -
ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.00 ಘಂಟೆಯವರೆಗೆ.
ಸಂಜೆ 4.00 ರಿಂದ ಸಂಜೆ 6.00 ಘಂಟೆಯವರವಿಗೆ.
ರಾತ್ರಿ 7.00 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ವಿಶೇಷ ದಿನಗಳು [ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳು ] -
ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
ಸಂಜೆ 3.30 ರಿಂದ ಸಂಜೆ 6.00 ಘಂಟೆಯವರವಿಗೆ.
ಸಂಜೆ 7.00 ರಿಂದ ಸಂಜೆ 8.00 ಘಂಟೆಯವರವಿಗೆ.

ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ದರ್ಶನ ವೇಳೆ (ಬೆಟ್ಟ)-
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
ಸಂಜೆ 5.30 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ಧನ್ಯವಾದಗಳು

Last modified on 19/07/2018

Share this article

About Author

Super User
Leave a comment

Write your comments

Visitors Counter

237934
Today
Yesterday
This Week
This Month
Last Month
All days
136
101
562
6170
8165
237934

Your IP: 34.239.170.244
2024-06-19 06:19

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles